ಸೆಪ್ಟೆಂಬರ್ 09, 2026
ವಿದ್ಯಾರಣ್ಯಪುರ ಮಿಸ್ಸಿಂಗ್ ಕೇಸ್ಗೆ ಕೊನೆಗೂ ಸುಖಾಂತ್ಯ: 8 ತಿಂಗಳ ಬಳಿಕ ಪತ್ತೆಯಾದ ಕಾಲೇಜು ಯುವತಿಯರು!
ಬೆಂಗಳೂರು (ಕರುನಾಡ ಬಲ ನ್ಯೂಸ್):
ರಾಜಧಾನಿಯ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಕೊನೆಗೂ ಸಿಐಡಿ (CID) ಅಧಿಕಾರಿಗಳ ತನಿಖೆಯ ಬಲೆಗೆ ಬಿದ್ದಿದ್ದಾರೆ. ಕಳೆದ 8 ತಿಂಗಳಿಂದ ಪೊಲೀಸರಿಗೆ ಸವಾಲಾಗಿದ್ದ ಈ ನಾಪತ್ತೆ ಪ್ರಕರಣಕ್ಕೆ ಈಗ ತೆರೆ ಬಿದ್ದಿದ್ದು, ಯುವತಿಯರನ್ನು ಅಧಿಕಾರಿಗಳು ಸುರಕ್ಷಿತವಾಗಿ ಪತ್ತೆ ಹಚ್ಚಿದ್ದಾರೆ.
ಘಟನೆಯ ಹಿನ್ನೆಲೆ:
ಜನವರಿ 31ರಂದು 2ನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತನಿಷ್ಕಾ ಹಾಗೂ 1ನೇ ಪಿಯುಸಿಯ ತೇಜಸ್ವಿನಿ ಕಾಲೇಜಿಗೆ ತೆರಳಿದವರು ಮನೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದರು. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ಯಾವುದೇ ಬಲವಾದ ಸುಳಿವು ಸಿಗದ ಹಿನ್ನೆಲೆಯಲ್ಲಿ ತನಿಷ್ಕಾ ಕುಟುಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ಗಾಂಭೀರ್ಯತೆಯನ್ನು ಪರಿಗಣಿಸಿದ ಉನ್ನತ ನ್ಯಾಯಾಲಯ, ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶಿಸಿತ್ತು.
ಮಲೆ ಮಹದೇಶ್ವರ ಬೆಟ್ಟದಲ್ಲಿದ್ದ ಸುಳಿವು:
ಪ್ರಕರಣ ಕೈಗೆತ್ತಿಕೊಂಡ ಸಿಐಡಿ ತಂಡ ಕಳೆದ ಮೂರು ತಿಂಗಳಿಂದ ಅಹೋರಾತ್ರಿ ಹುಡುಕಾಟ ನಡೆಸಿತ್ತು. ವಿದ್ಯಾರಣ್ಯಪುರ ಪೊಲೀಸರು ನಡೆಸಿದ್ದ ಪ್ರಾಥಮಿಕ ತನಿಖೆಯಲ್ಲಿ ಯುವತಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದು ಗೊತ್ತಾಗಿತ್ತು. ಅಲ್ಲಿ ಮಗುವೊಂದರ ಜೊತೆ ಆಟವಾಡುತ್ತಿದ್ದಾಗ, ಮಗುವಿನ ತಾಯಿ ಇವರ ಜೊತೆ ತೆಗೆದುಕೊಂಡಿದ್ದ ಸೆಲ್ಫಿ ಫೋಟೋ ಒಂದೇ ಪೊಲೀಸರಿಗೆ ಸಿಕ್ಕಿದ್ದ ಪ್ರಮುಖ ಸಾಕ್ಷಿಯಾಗಿತ್ತು. ಅದಾದ ಬಳಿಕ ಇಬ್ಬರ ಯಾವುದೇ ಸುಳಿವು ಲಭ್ಯವಿರಲಿಲ್ಲ.
ಅನಾಥರೆಂದು ಸುಳ್ಳು ಹೇಳಿ ಮದುವೆಯಾಗಿದ್ದ ಯುವತಿ:
ಮನೆಯಲ್ಲಿದ್ದ ಒತ್ತಡ ತಾಳಲಾರದೆ ಬಂದಿದ್ದಾಗಿ ಹೇಳಿಕೊಂಡಿದ್ದ ತನಿಷ್ಕಾ, ಬೆಟ್ಟದಲ್ಲಿ ಕನಕಪುರ ತಾಲೂಕಿನ ಯುವಕನೊಬ್ಬನ ಪರಿಚಯ ಮಾಡಿಕೊಂಡಿದ್ದಳು. ತಮಗೆ ತಂದೆ-ತಾಯಿ ಅಥವಾ ಕುಟುಂಬಸ್ಥರು ಯಾರೂ ಇಲ್ಲ, ತಾವಿಬ್ಬರೂ ಅನಾಥ ಸಹೋದರಿಯರು ಎಂದು ಸುಳ್ಳು ಹೇಳಿ ನಂಬಿಸಿದ್ದಳು. ಬಳಿಕ ಆ ಯುವಕ ಇಬ್ಬರನ್ನೂ ತನ್ನ ಮನೆಗೆ ಕರೆದೊಯ್ದು, ತನಿಷ್ಕಾಳನ್ನು ವಿವಾಹವಾಗಿದ್ದ. ತೇಜಸ್ವಿನಿಯನ್ನು ತಂಗಿ ಎಂದು ಜೊತೆಯಲ್ಲೇ ಇಟ್ಟುಕೊಂಡು ಸಂಸಾರ ನಡೆಸುತ್ತಿದ್ದರು.
ಸಿಐಡಿ ಬಲೆಗೆ ಬಿದ್ದಿದ್ದು ಹೇಗೆ?
ಮದುವೆಯಾಗಿ ಸಂಸಾರ ನಡೆಸುತ್ತಿದ್ದ ತನಿಷ್ಕಾ, ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ತನ್ನ ಆಧಾರ್ ಕಾರ್ಡ್ ನೀಡಿದ್ದಳು. ಈ ಆಧಾರ್ ನಂಬರ್ ಬಳಕೆಯಾಗುತ್ತಿದ್ದಂತೆಯೇ ಟೆಲಿಕಾಂ ಸರ್ವಿಸ್ ಪ್ರೊವೈಡರ್ನಿಂದ ಸಿಐಡಿ ಅಧಿಕಾರಿಗಳಿಗೆ ಅಲರ್ಟ್ ಮೆಸೇಜ್ ರವಾನೆಯಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಐಡಿ ತಂಡ, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಇಬ್ಬರೂ ಯುವತಿಯರು ಪತ್ತೆಯಾಗಿದ್ದಾರೆ.
ಪ್ರಸ್ತುತ ತನಿಷ್ಕಾ ಗರ್ಭಿಣಿಯಾಗಿದ್ದು, ಸಿಐಡಿ ಅಧಿಕಾರಿಗಳು ಇಂದು ಇಬ್ಬರೂ ಯುವತಿಯರನ್ನು ಮಾನ್ಯ ಹೈಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.
ಕರುನಾಡ ಬಲ ನ್ಯೂಸ್ – ಸತ್ಯದ ಪರ, ಜನತೆಯ ಧ್ವನಿ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

