ಬೆಂಗಳೂರಿನಲ್ಲಿ ಕರಾಳ ಜಾಲ: ಜೀವಬಾಧಿಸುವ ನಕಲಿ ಕ್ಯಾನ್ಸರ್ ಔಷಧ ದಂಧೆ ಪತ್ತೆ – 90ಕ್ಕೂ ಹೆಚ್ಚು ಆಸ್ಪತ್ರೆಗಳು ತನಿಖೆಯ ನೆರಳಿನಲ್ಲಿ!
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ರೋಗಿಗಳ ಜೀವದ ಜತೆ ಚೆಲ್ಲಾಟವಾಡುತ್ತಿದ್ದ ಬೃಹತ್ ನಕಲಿ ಕ್ಯಾನ್ಸರ್ ಮತ್ತು ತುರ್ತು ಚಿಕಿತ್ಸಾ (ICU) ಔಷಧಿಗಳ ಜಾಲವನ್ನು ಕರ್ನಾಟಕದ ವಿಶೇಷ ತನಿಖಾ ತಂಡ (SIT) ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ.
ದಂಧೆಯ ಅಸಲಿಯತ್ತು ಹೇಗೆ ಬಯಲಾಯಿತು?
ಮೂಲಗಳ ಪ್ರಕಾರ, ಈ ದಂಧೆಕೋರರು ಕಡಿಮೆ ಬೆಲೆಯ ಸಾಮಾನ್ಯ ಅಥವಾ ಅವಧಿ ಮುಗಿದ (Expired) ಔಷಧಿಗಳನ್ನು ಕಡಿಮೆ ದರಕ್ಕೆ ಖರೀದಿಸುತ್ತಿದ್ದರು. ಬಳಿಕ ಬಿಡದಿ ಸಮೀಪದ ಖಾಸಗಿ ಘಟಕದಲ್ಲಿ ಅವುಗಳನ್ನು ಮರುಪ್ಯಾಕಿಂಗ್ ಮಾಡಿ, ಜನಪ್ರಿಯ ಬಹುರಾಷ್ಟ್ರೀಯ ಕಂಪನಿಗಳ (ಉದಾಹರಣೆಗೆ ಫೈಜರ್ ಮುಂತಾದವು) ದುಬಾರಿ ಕ್ಯಾನ್ಸರ್ ಔಷಧಿಗಳ ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು.
90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ!
ಮಾರ್ಕೆಟ್ನಲ್ಲಿ ಅತಿ ಹೆಚ್ಚು ಬೇಡಿಕೆಯಲ್ಲಿರುವ ಜೀವ ರಕ್ಷಕ ಕ್ಯಾನ್ಸರ್ ಔಷಧಿಗಳನ್ನು ಈ ವಂಚಕರು ಅಂದಾಜು ಶೇಕಡಾ 50ರಷ್ಟು ಭಾರೀ ರಿಯಾಯಿತಿ ದೆರೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಒಟ್ಟು 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್ಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.
ದಾಳಿ ಮತ್ತು ಬಂಧನ:
ಮಿನರ್ವಾ ಸರ್ಕಲ್ ಬಳಿಯಿರುವ 'ಕೃಪಾ ಹೆಲ್ತ್ ಕೇರ್' (Krupa Health Care) ಎಂಬ ಔಷಧ ಮಳಿಗೆಯ ಮೇಲೆ ದಾಳಿ ನಡೆಸಿ, ಕೋಟ್ಯಂತರ ರೂ. ಮೌಲ್ಯದ ನಕಲಿ ಔಷಧಗಳು, ಲೇಬಲ್ಗಳು ಮತ್ತು ಇಂಜೆಕ್ಷನ್ ತುಂಬುವ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಔಷಧ ಮಳಿಗೆಯ ಮಾಲೀಕ ವರೇಶ್ಕುಮಾರ್ ಜೈನ್ ಎಂಬಾತನನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಪ್ರಶಾಂತ್ ಎಂಬಾತ ತಲೆಮರೆಸಿಕೊಂಡಿದ್ದು, ಅವನಿಗಾಗಿ ಶೋಧ ಮುಂದುವರಿದಿದೆ.
ತನಿಖೆಯನ್ನು ತೀವ್ರಗೊಳಿಸಲು ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ 6 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ತೆಲಂಗಾಣ ಹಾಗೂ ಗುಜರಾತ್ ವರೆಗೆ ಈ ಜಾಲದ ನಂಟು ಹಬ್ಬಿರುವ ಶಂಕೆ ವ್ಯಕ್ತವಾಗಿದೆ.
ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳ ಜೀವದ ಜತೆ ಆಟವಾಡುತ್ತಿರುವ ಈ ನಕಲಿ ಜಾಲದ ಹಿಂದೆ ದೊಡ್ಡ ಮಟ್ಟದ ಜಾಲವೇ ಕಾರ್ಯನಿರ್ವಹಿಸುತ್ತಿದ್ದು, ಸಮಗ್ರ ತನಿಖೆಯ ಬಳಿಕ ಮತ್ತಷ್ಟು ಸ್ಪಷ್ಟ ಮಾಹಿತಿ ಹೊರಬರಲಿದೆ.
ಸ್ಥಳೀಯ ಸುದ್ದಿಗಳ ಹೆಚ್ಚಿನ ಅಪ್ಡೇಟ್ಗಳಿಗಾಗಿ 'ಕರುನಾಡ ಬಲ ನ್ಯೂಸ್' ಓದುಗರೊಂದಿಗೆ ಇರಿ.