ಸೆಪ್ಟೆಂಬರ್ 02, 2026
ವಿಶೇಷ ವರದಿ: ಅಂಗವಿಕಲ ತಂದೆಯ ಪಿಂಚಣಿಗೆ ಲಂಚ ಕೇಳಿದ್ದ ಉಪ ತಹಶೀಲ್ದಾರ್ಗೆ 4 ವರ್ಷ ಜೈಲು ಶಿಕ್ಷೆ!
ಶಿವಮೊಗ್ಗ (ಕರುನಾಡ ಬಲ ನ್ಯೂಸ್):
ಸರ್ಕಾರದ ಸೌಲಭ್ಯಕ್ಕಾಗಿ ಅಲೆದಾಡುತ್ತಿದ್ದ ಹುಟ್ಟು ಮೂಕ ಹಾಗೂ ಅಂಗವಿಕಲ ತಂದೆಯ ಪಿಂಚಣಿ ಮಂಜೂರಾತಿಗೆ ಲಂಚದ ಬೇಡಿಕೆಯಿಟ್ಟಿದ್ದ ಅಧಿಕಾರಿಗೆ ನ್ಯಾಯಾಲಯ ತಕ್ಕ ಪಾಠ ಕಳಿಸಿದೆ. ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಾಡಕಚೇರಿಯ ಅಂದಿನ ಉಪ ತಹಶೀಲ್ದಾರ್ ಪುಷ್ಪಲತಾ ಅವರಿಗೆ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷಗಳ ಸಜಾ ಜೈಲು ಶಿಕ್ಷೆ ಹಾಗೂ 40,000 ರೂಪಾಯಿ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ:
ಭದ್ರಾವತಿ ತಾಲೂಕಿನ ಡಿ. ಬಿ. ಹಳ್ಳಿಯ ನಿವಾಸಿ ಗಿರೀಶ್ ಎಂಬುವವರು ತಮ್ಮ ಹುಟ್ಟು ಮೂಕ ತಂದೆಗೆ ಅಂಗವಿಕಲರ ಪಿಂಚಣಿ ಸೌಲಭ್ಯ ದೊರಕಿಸಿಕೊಡಲು ಕಲ್ಲಿಹಾಳ್ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಕೆಲಸ ಮಾಡಿಕೊಡಲು ಉಪ ತಹಶೀಲ್ದಾರ್ ಪುಷ್ಪಲತಾ ಅವರು 10,000 ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಲಂಚ ಕೊಡಲು ಇಷ್ಟವಿಲ್ಲದ ಗಿರೀಶ್ ಅವರು ಲೋಕಾಯುಕ್ತ ಪೊಲೀಸರ ಬಾಗಿಲು ತಟ್ಟಿದ್ದರು.
ಲೋಕಾಯುಕ್ತ ಬಲೆಗೆ ಬಿದ್ದಿದ್ದ ಭ್ರಷ್ಟ ಅಧಿಕಾರಿ:
ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ರೂಪಿಸಿದ್ದರು. 2017ರ ಸೆಪ್ಟೆಂಬರ್ 21ರಂದು ಭದ್ರಾವತಿ ತಾಲೂಕು ಕಚೇರಿಯಲ್ಲಿ ಗಿರೀಶ್ ಅವರಿಂದ ಮುಂಗಡವಾಗಿ 5,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಉಪ ತಹಶೀಲ್ದಾರ್ ಅವರನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು.
9 ವರ್ಷಗಳ ಸುದೀರ್ಘ ಕಾನೂನು ಹೋರಾಟ:
ಪ್ರಕರಣದ ತನಿಖಾಧಿಕಾರಿ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್. ತಿಪ್ಪೇಸ್ವಾಮಿ ಅವರು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಸುಂದರ್ ರಾಜ್ ವಾದ ಮಂಡಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪ ಸಂಪೂರ್ಣವಾಗಿ ಸಾಬೀತಾದ ಹಿನ್ನೆಲೆಯಲ್ಲಿ ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದ್ದಾರೆ.
ವಿಕಲಚೇತನರು ಹಾಗೂ ಅಸಹಾಯಕರ ಹಕ್ಕಿನ ಹಣಕ್ಕೆ ಕನ್ನ ಹಾಕಲು ಯತ್ನಿಸುವ ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ಬಿಸಿ ಮುಟ್ಟಿಸಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

