ಆಗಸ್ಟ್ 20, 2026
ಚಾಮರಾಜಪೇಟೆ: ವೈದ್ಯಕೀಯ ಕ್ಷೇತ್ರದಲ್ಲಿ ಜೀವ ಉಳಿಸಲು ಬಳಸುವ ಸಲಕರಣೆಗಳು, ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದರೆ ಜನರ ಹಾಗೂ ಮೂಕ ಪ್ರಾಣಿಗಳ ಪ್ರಾಣಕ್ಕೇ ಕಂಠಕವಾಗಬಲ್ಲವು ಎಂಬುದಕ್ಕೆ ಚಾಮರಾಜಪೇಟೆಯಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಚಾಮರಾಜಪೇಟೆಯ ಸಿರ್ಸಿ ರಸ್ತೆ, 8ನೇ ಅಡ್ಡರಸ್ತೆ, ಕನ್ಸರ್ವೆನ್ಸಿಯಲ್ಲಿ (1ನೇ ಮುಖ್ಯರಸ್ತೆ, 8ನೇ ಅಡ್ಡರಸ್ತೆ ಕನ್ಸರ್ವೆನ್ಸಿ - ಜೋಶಿ ನರ್ಸಿಂಗ್ ಹೋಮ್ ಹಿಂಭಾಗ) ಕಳೆದ ಎರಡಮೂರು ದಿನಗಳಿಂದ ಸುಮಾರು 2,000 ರಿಂದ 3,000ಕ್ಕೂ ಹೆಚ್ಚು ಬಳಸಿದ ವೈದ್ಯಕೀಯ ಸಿರಿಂಜ್ಗಳನ್ನು (Syringes) ಅಜಾಗರೂಕತೆಯಿಂದ ಚೆಲ್ಲಾಪಿಲ್ಲಿಯಾಗಿ ಬಿಸಾಡಲಾಗಿದೆ. ಈ ರೀತಿ ಜವಾಬ್ದಾರಿರಹಿತವಾಗಿ ಬಿಸಾಡಿದವರು ಯಾರು ಎಂಬುದು ಇನ್ನು ತಿಳಿದುಬಂದಿಲ್ಲ.
ಮೂಕ ಪ್ರಾಣಿಗಳಿಗೆ ಹಾಗೂ ಮಕ್ಕಳಿಗೆ ಆಪತ್ತು:
ಈ ರಸ್ತೆಯಲ್ಲಿ ದಿನನಿತ್ಯ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆಯಲ್ಲಿ ಆಹಾರ ಅರಸಿ ಅನೇಕ ಹಸುಗಳು ಮತ್ತು ಇತರ ಮೂಕ ಪ್ರಾಣಿಗಳು ಸಂಚರಿಸುತ್ತವೆ. ಆಕಸ್ಮಿಕವಾಗಿ ಈ ಸಿರಿಂಜ್ಗಳನ್ನು ಆಹಾರವೆಂದು ಭಾವಿಸಿ ಪ್ರಾಣಿಗಳು ಸೇವಿಸಿದರೆ ಅಥವಾ ಚುಚ್ಚಿಕೊಂಡರೆ ಉಂಟಾಗುವ ಅನಾಹುತವನ್ನು ಊಹಿಸಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಸಣ್ಣ ಪುಟ್ಟ ಮಕ್ಕಳು ಆಟವಾಡುತ್ತಾ ಓಡಾಡುತ್ತಿರುತ್ತಾರೆ. ಮಕ್ಕಳ ಕೈಗೆ ಈ ಅಪಾಯಕಾರಿ ಸೂಜಿಗಳು ಸಿಕ್ಕರೆ ಪ್ರಾಣಾಪಾಯ ಅಥವಾ ಗಂಭೀರ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಅಧಿಕಾರಿಗಳ ಗಮನಕ್ಕೆ ಮನವಿ:
ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳಿಗೆ ಮತ್ತು ವೈದ್ಯರಿಗೆ ಅತ್ಯಂತ ಉಪಯುಕ್ತವಾಗಿರುವ ಈ ಸಿರಿಂಜ್ಗಳು, ಈ ರೀತಿ ಸಾರ್ವಜನಿಕ ಸ್ಥಳದಲ್ಲಿ ರಸ್ತೆಗೆ ಎಸೆಯಲ್ಪಟ್ಟಾಗ ದೊಡ್ಡ ಮಟ್ಟದ ಅಪಾಯವನ್ನು ತಂದೊಡ್ಡುತ್ತವೆ. ಈ ಕೂಡಲೇ ಬಿಬಿಎಂಪಿ (BBMP) ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಮತ್ತು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ತಕ್ಷಣವೇ ತೆರವುಗೊಳಿಸಬೇಕೆಂದು ಸಾರ್ವಜನಿಕರು ಆಕ್ರೋಶದೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

