ಆಗಸ್ಟ್ 16, 2026
ಬೆಂಗಳೂರು (ಕರುನಾಡ ಬಲ ನ್ಯೂಸ್):
ಒಂದು ಕಾಲದಲ್ಲಿ ‘ಭಾರತದ ಕಾಲಪಾಲಕ’ ಎಂದೇ ಮನೆಮಾತಾಗಿದ್ದ ದೇಶದ ಹೆಮ್ಮೆಯ ಬ್ರ್ಯಾಂಡ್ HMT (ಹೆಚ್ಎಂಟಿ) ಕೈಗಡಿಯಾರಗಳಿಗೆ ಮಾರುಕಟ್ಟೆಯಲ್ಲಿ ಮತ್ತೆ ಭಾರಿ ಕ್ರೇಜ್ ಆರಂಭವಾಗಿದೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ HMT ಪ್ರಮುಖ ಶೋರೂಮ್ ಎದುರು ಗಡಿಯಾರ ಪ್ರಿಯರು ಹಾಗೂ ಸಾರ್ವಜನಿಕರು ಬಿಸಿಲನ್ನೂ ಲೆಕ್ಕಿಸದೆ ಸುಮಾರು 2 ಕಿಲೋಮೀಟರ್ ಉದ್ದದ ಸಾಲಿನಲ್ಲಿ ನಿಂತು ವಾಚ್ ಖರೀದಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ನಲ್ಲಿವೆ.
ಕ್ರೇಜ್ ಹೆಚ್ಚಾಗಲು ಪ್ರಮುಖ ಕಾರಣಗಳು:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಭಾವ: ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ದೇಶದ ಹಾಗೂ ನಾಡಿನ ಹೆಮ್ಮೆಯ ಸಂಸ್ಥೆಯಾದ
ಹೆಚ್ಎಂಟಿ ವಾಚ್ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾವು ಧರಿಸಿ, ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಯವರಿಗೂ HMT ವಾಚ್ ಉಡುಗೊರೆಯಾಗಿ ನೀಡಿ ಧರಿಸುವಂತೆ ಸೂಚಿಸಿದ್ದರು. ಸ್ಥಳೀಯ ಸಂಸ್ಥೆಯನ್ನು ಬೆಂಬಲಿಸುವಂತೆ ಅವರು ನೀಡಿದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಯುವಜನರಲ್ಲಿ ಹೆಚ್ಎಂಟಿ ವಾಚ್ ಧರಿಸುವ ಕ್ರೇಜ್ಗೆ ಹೊಸ ಜೀವ ನೀಡಿದೆ.
ಲಿಮಿಟೆಡ್ ಎಡಿಷನ್ ಆಕರ್ಷಣೆ: ಸಂಸ್ಥೆಯು ಇತ್ತೀಚೆಗೆ ಸ್ವಾತಂತ್ರ್ಯೋತ್ಸವದ ವಿಶೇಷ ಸಂಭ್ರಮಕ್ಕಾಗಿ ಬಿಡುಗಡೆ ಮಾಡಿರುವ 'ಸ್ಪೆಷಲ್ ಲಿಮಿಟೆಡ್ ಎಡಿಷನ್' ವಾಚ್ಗಳು ಹಾಗೂ ಕ್ಲಾಸಿಕ್ ಮೆಕ್ಯಾನಿಕಲ್ ವಾಚ್ಗಳಿಗೆ ಭಾರೀ ಬೇಡಿಕೆ ಬಂದಿದೆ.
ಗತವೈಭವದ ನೆನಪು: ಆಕರ್ಷಕ ಡಯಲ್, ಕನ್ನಡ ಸಂಖ್ಯೆಗಳು ಹಾಗೂ ಕ್ಲಾಸಿಕ್ ಲುಕ್ ಹೊಂದಿರುವ ₹2,000 ದಿಂದ ₹10,000 ಬೆಲೆಯ ಈ ಕೈಗಡಿಯಾರಗಳನ್ನು ತಮ್ಮದಾಗಿಸಿಕೊಳ್ಳಲು ಸಾರ್ವಜನಿಕರು ಮುಂಜಾನೆಯಿಂದಲೇ ಶೋರೂಮ್ ಮುಂದೆ ಸಾಲು ಗಟ್ಟಿದ್ದಾರೆ.
ಶೋರೂಮ್ ಬಳಿ ಜನಸಾಗರ:
ಜಾಲಹಳ್ಳಿಯ ಶೋರೂಮ್ ಮುಂದೆ ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಹೆಚ್ಎಂಟಿ ಸಂಸ್ಥೆಗೆ ಈ ಮಟ್ಟಿನ ಬೇಡಿಕೆ ಬಂದಿರುವುದು ಕನ್ನಡಿಗರಲ್ಲಿ ಹಾಗೂ ಗಡಿಯಾರ ಪ್ರಿಯರಲ್ಲಿ ಹೊಸ ಆಶಾದಾಯಕ ವಾತಾವರಣ ಸೃಷ್ಟಿಸಿದೆ. ಸ್ವದೇಶಿ ಉತ್ಪನ್ನಗಳಿಗೆ ಮತ್ತು ಕರ್ನಾಟಕದ ಹೆಮ್ಮೆಯ ಸಂಸ್ಥೆಗೆ ಸಾರ್ವಜನಿಕರು ನೀಡುತಿರುವ ಬೆಂಬಲವೇ ಈ ಟ್ರೆಂಡ್ಗೆ ಕಾರಣವಾಗಿದೆ.
ವರದಿ: ವಿಶೇಷ ವರದಿಗಾರ, ಕರುನಾಡ ಬಲ ನ್ಯೂಸ್, ಬೆಂಗಳೂರು.
Tags
ಇತರ ಅಪ್ಲಿಕೇಶನ್ಗಳಿಗೆ ಹಂಚಿಕೊಳ್ಳಿ

